ಅದೃಷ್ಟ ಬದಲಿಸಿದ ಹಳೆ ಚಮಚ: ಖರೀದಿಸಿದ್ದು 90 ಪೈಸೆಗೆ, ಮಾರಿದ್ದು 2 ಲಕ್ಷಕ್ಕೆ

Written by Soma Shekar

Published on:

---Join Our Channel---

ಕೆಲವೊಮ್ಮೆ ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಎನ್ನುವುದನ್ನು ಯಾರು ಕೂಡಾ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಲವೊಮ್ಮೆ ರಸ್ತೆ ಬದಿಯಲ್ಲಿ ಸಿಗುವ ವಸ್ತುಗಳೂ ಕೆಲವರ ಜೀವನವನ್ನು ಬದಲಿಸಬಹುದು. ಅಲ್ಲದೇ ವ್ಯರ್ಥವೆಂದು ತಿಳಿದು ಬಿಸಾಡದೆ, ಉಪಯೋಗಿಸದೇ ಮನೆಯಲ್ಲಿ ಇಟ್ಟಂತಹ ವಸ್ತುಗಳೂ ಯಾವುದೋ ಒಂದು ಸಂದರ್ಭದಲ್ಲಿ ಅಮೂಲ್ಯ ವಸ್ತುಗಳೆಂದು ತಿಳಿದು ಅದರ ಮಾರಾಟದಿಂದ ವಿದೇಶಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆದಿರುವ ಉದಾಹರಣೆಗಳು ಕೂಡಾ ಉಂಟು. ಇನ್ನೂ ಕೆಲವರು ಪ್ರವಾಸ ಹೋದಾಗ ಕೊಂಡು ತಂದ ವಸ್ತುಗಳು ಪುರಾತನ ಕಾಲಕ್ಕೆ ಸೇರಿದ್ದು ಎನ್ನುವುದು ತಿಳಿದಾಗ ಆಶ್ಚರ್ಯ ಪಟ್ಟಿರುವುದು ಮಾತ್ರವೇ ಅಲ್ಲದೆ ಅಂತಹ ಅಮೂಲ್ಯ ವಸ್ತುಗಳ ಬದಲಿಗೆ ದೊಡ್ಡ ಮೊತ್ತದ ಹಣವನ್ನು ಪಡೆದಿರುವುದು ಉಂಟು.

ಈಗ ಇಂತಹದೇ ಒಂದು ವಿಚಿತ್ರವಾದ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಲಂಡನ್ನಿನ ಬೀದಿಯಲ್ಲಿ ನಡೆದು ಹೋಗುವಂತಹ ಸಂದರ್ಭದಲ್ಲಿ ಅವರ ಕಣ್ಣಿಗೆ ಒಂದು ಹಳೆಯ ನಜ್ಜುಗುಜ್ಜಾದ ಚಮಚ ಕಂಡಿದೆ. ಅವರು ಆ ಹಳೆಯ ಚಮಚವನ್ನು ಖರೀದಿ ಮಾಡಿ ಆನಂತರ ಅದನ್ನು ಆನ್ಲೈನ್ನಲ್ಲಿ ಬರೋಬ್ಬರಿ ಎರಡು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿರುವ ಆಶ್ಚರ್ಯಕರ ಎನಿಸುವ ಘಟನೆಯೊಂದು ನಡೆದಿದೆ. ಹೌದು ಲಾರೆನ್ಸ್ ಎನ್ನುವಾತ ರಸ್ತೆಯಲ್ಲಿ ಹೋಗುವಾಗ ಐಕಿಯಾ ಸ್ಟೈಲ್ ಕಟ್ಲರಿ ಎನ್ನುವ ಚಮಚವನ್ನು ನೋಡಿದ್ದಾರೆ. ನೋಡಿ ಅವರು ಸುಮ್ಮನಾಗಿಲ್ಲ ಬದಲಾಗಿ ಅದನ್ನು ಖರೀದಿ ಮಾಡಿದ್ದಾರೆ.

ಲಾರೆನ್ಸ್ ಅದೊಂದು ಮಧ್ಯಕಾಲೀನ ಚಮಚ ಎಂದು ಭಾವಿಸಿ ಅದಕ್ಕೆ 90 ಪೈಸೆ ನೀಡಿ ಖರೀದಿ ಮಾಡಿದ್ದಾರೆ. ಸುಮಾರು ಐದು ಇಂಚಿನ ಈ ಚಮಚವನ್ನು ಅವರು ಬೆಳ್ಳಿ ಪರೀಕ್ಷಿಸುವ ತಜ್ಞರ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ. ಆಗ ಅಲ್ಲಿ ಅವರಿಗೆ ತಿಳಿದ ವಿಚಾರ ಏನೆಂದರೆ, ಆ ಚಮಚ 13ನೇ ಶತಮಾನದ ಅಂತ್ಯದ ವೇಳೆಯ ಚಮಚ ಎಂದೂ, ಅದರ ಬೆಲೆ 51,712 ರೂಪಾಯಿಗಳು ಎಂಬುದು ತಿಳಿದಿದೆ. ಲಾರೆನ್ಸ್ ಅವರಿಗೆ ಅದೊಂದು ವಿಶೇಷವಾದ ಚಮಚ ಎನ್ನುವುದು ಖಾತ್ರಿಯಾಗಿದೆ.

ಲಾರೆನ್ಸ್ ಚಮಚವನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ಸಲುವಾಗಿ ಅದರ ಹರಾಜನ್ನು ಮಾಡಿದ್ದಾರೆ. ಹರಾಜಿನಲ್ಲಿ ಪುರಾತನ ವಸ್ತುಗಳನ್ನು ಖರೀದಿ ಮಾಡುವ ಆಸಕ್ತಿ ಇರುವ ವ್ಯಕ್ತಿಯೊಬ್ಬರು ಈ ಚಮಚವನ್ನು 1,97,000 ರೂಪಾಯಿಗೆ ಕೊಂಡುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ತೆರಿಗೆ, ಹೆಚ್ಚುವರಿ ಶುಲ್ಕ ಎಲ್ಲವನ್ನೂ ಸೇರಿಸಿದಾಗ ಚಮಚದ ಬೆಲೆಯು ಎರಡು ಲಕ್ಷ ರೂಪಾಯಿಗಳಿಗಿಂತ ಅಧಿಕವಾಗಿದೆ. ಒಟ್ಟಾರೆ ಲಾರೆನ್ಸ್ ರಸ್ತೆ ಬದಿಯಲ್ಲಿ ಖರೀದಿಸಿದ ಚಮಚೆಯಿಂದ ದೊಡ್ಡ ಮೊತ್ತದ ಹಣ ಗಳಿಸಲು ಸಾಧ್ಯವಾಗಿದೆ.

Leave a Comment