ಅಣ್ಣ ರಾಜ್ಯವೊಂದಕ್ಕೆ ಮುಖ್ಯಮಂತ್ರಿ, ಆದ್ರೆ ತಂಗಿ ರಸ್ತೆ ಬದಿಯಲ್ಲಿ ಟೀ ಮಾರುತ್ತಾ ಜೀವನ ನಡೆಸ್ತಾ ಇದ್ದಾರೆ
ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ರಾಜಕೀಯದಲ್ಲಿ ಸಣ್ಣ ಪುಟ್ಟ ಸ್ಥಾನವನ್ನು ಪಡೆದುಕೊಂಡರೂ ಸಹಾ ಅವರ ಕುಟುಂಬ ವರ್ಗ ಮಾತ್ರವೇ ಅಲ್ಲದೇ ಅವರ ಸಂಬಂಧಿಕರು ಸಹಾ ಒಂದು ರೀತಿಯ ಗತ್ತನ್ನು ಪ್ರದರ್ಶನ ಮಾಡುವುದನ್ನು ನಾವು ನೋಡಬಹುದು. ಅಲ್ಲದೇ ರಾಜಕೀಯ ನಾಯಕರು ಹಾಗೂ ಅವರ ಆಪ್ತರ ಜೀವನ ಸಹಾ ಬಹಳ ಬೇಗ ಬದಲಾಗಿ ಬಿಡುತ್ತದೆ. ಆಸ್ತಿ ಅಂತಸ್ತನ್ನು ಗಳಿಸಿ, ಐಶಾರಾಮೀ ಜೀವನ ಅವರ ಜೀವನ ಶೈಲಿ ಆಗಿ ಬಿಡುತ್ತದೆ. ಅಧಿಕಾರದಲ್ಲಿ ಇರುವ ತಮ್ಮವರ ಹೆಸರು ಹೇಳಿಕೊಂಡು ಮೆರೆಯುವುದು ಉಂಟು. ಆದರೆ ಇದಕ್ಕೆಲ್ಲಾ ಭಿನ್ನವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುಟುಂಬದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ಅವರ ಸಹೋದರ, ಸಹೋದರಿಯರು ಇಂದಿಗೂ ಸಾಮಾನ್ಯರಂತೆಯೇ ಜೀವನ ನಡೆಸುತ್ತಿದ್ದಾರೆ ಎಂದರೆ ಆಶ್ಚರ್ಯ ಆಗಬಹುದು.
ಸನ್ಯಾಸಿಯಾಗಲು ಮನೆಯನ್ನು ತೊರೆದು ಬಂದ ಮೇಲೆ ಯೋಗಿ ಆದಿತ್ಯನಾಥ್ ಅವರು ಮತ್ತೆ ಮನೆ ಕಡೆ ಬಂದವರಲ್ಲ. ಅವರ ಕುಟುಂಬ ಸಿಎಂ ಕುಟುಂಬ ಎನ್ನುವ ಯಾವುದೇ ದರ್ಪವಿಲ್ಲದೇ ಸಾಮಾನ್ಯರಂತೆ ಬದುಕು ನಡೆಸಿದ್ದಾರೆ. ಆದಿತ್ಯನಾಥ್ ಅವರ ಸಹೋದರಿಯರಲ್ಲಿ ಕೊನೆಯ ಸಹೋದರಿಯಾಗಿರುವ ಶಶಿ ದೇವಿ ಅವರು ಪುಣ್ಯಕ್ಷೇತ್ರವಾದ ಋಷಿಕೇಷದಲ್ಲಿ ಟೀ ಅಂಗಡಿಯನ್ನು ನಡೆಸುತ್ತಾ ಜೀವನ ನಡೆಸುತ್ತಿದ್ದಾರೆ ಎಂದರೆ ಅಚ್ಚರಿ ಹಾಗೂ ಶಾ ಕ್ ಆಗಬಹುದು. ಶಶಿ ದೇವಿ ಅವರ ಒಂದು ಅಂಗಡಿ ನೀಲಕಂಠ ಮಂದಿರದ ಬಳಿ, ಇನ್ನೊಂದು ಭುವನೇಶ್ವರಿ ಮಂದಿರದ ಬಳಿ ಇದೆ.
ಈ ಸಣ್ಣ ಅಂಗಡಿಗಳಲ್ಲಿ ಅವರು ಟೀ, ಪಕೋಡ ಮಾರಾಟ ಮಾಡುವುದರ ಜೊತೆಗೆ, ಪ್ರಸಾದ, ಹೂವು, ಹಣ್ಣುಗಳು, ಬಿಸ್ಕತ್ತು, ನ್ಯೂಸ್ ಪೇಪರ್ ಗಳನ್ನು ಮಾರಾಟ ಮಾಡುತ್ತಾರೆ. ಅಲ್ಲಿಗೆ ಭೇಟಿ ನೀಡುವ ಎಷ್ಟೋ ಜನರಿಗೆ ಆಕೆ ಉತ್ತರ ಪ್ರದೇಶದ ಸಿಎಂ ಅವರ ತಂಗಿ ಎನ್ನುವ ವಿಚಾರ ತಿಳಿದಿಲ್ಲ. ಅಲ್ಲದೇ ಕೆಲವರು ಅದನ್ನು ನಂಬುವುದು ಸಹಾ ಇಲ್ಲ ಎನ್ನುವುದು ಕೂಡಾ ವಾಸ್ತವ. ಶಶಿ ದೇವಿ ಅವರು ತಮ್ಮ ಸಹೋದರ ತನಗೆ ಏನೂ ಮಾಡದೇ ಹೋದರೂ ಪರವಾಗಿಲ್ಲ ಆದರೆ ಅಲ್ಲಿನ ಗುಡ್ಡ ಗಾಡು ಜನರ ಜೀವನದಲ್ಲಿ ಒಂದು ಬದಲಾವಣೆ ತರುವ ಪ್ರಯತ್ನ ಮಾಡಿದರೆ ಸಾಕು ಎನ್ನುತ್ತಾರೆ.
ಶಶಿ ದೇವಿ ಅವರು ತಮಗೆ ಸಹೋದರನನ್ನು ಭೇಟಿ ಮಾಡುವ ಆಸೆ ಇದೆಯಾದರೂ ಅದಕ್ಕೆ ಅವಕಾಶ ಸಿಗುವುದಿಲ್ಲ ಎನ್ನುತ್ತಾರೆ. ಇನ್ನು ಶಶಿ ದೇವಿ ಅವರ ಪತಿ ಪೂರಣ್ ಸಿಂಗ್ ಪಯಾಲ್ ಅವರು ಒಮ್ಮೆ ಗ್ರಾಮ ಪ್ರಧಾನರಾಗಿದ್ದರು. ತಮ್ಮ ಸಹೋದರ ಸನ್ಯಾಸವನ್ನು ಸ್ವೀಕರಿಸಿದ ನಂತರ ನಾನು ಎಲ್ಲಾ ಸಾಧು ಹಾಗೂ ಸನ್ಯಾಸಿಗಳಲ್ಲಿ ನನ್ನ ಸಹೋದರನನ್ನು ನೋಡುತ್ತೇನೆ ಎಂದು ಶಶಿ ದೇವಿ ಅವರು ಹೇಳುತ್ತಾರೆ. ದೂರದ ಸಂಬಂಧಿಕರು ರಾಜಕಾರಣಿಗಳಾಗಿದ್ದರೇನೇ ದರ್ಪ ಮೆರೆಯುವ ಜನರಿರುವ ಈ ಕಾಲದಲ್ಲಿ ಅಣ್ಣ ಮುಖ್ಯಮಂತ್ರಿಯಾದರೂ ಟೀ ಅಂಗಡಿ ನಡೆಸುತ್ತಾ ಸಾಮಾನ್ಯ ಜೀವನ ನಡೆಸುವ ಶಶಿ ದೇವಿ ಮಾದರಿಯಾಗಿದ್ದಾರೆ.