ಅಗಾಧ ಸಂಪತ್ತು ಅಡಗಿರುವ ಈ ಗುಹೆ ಇಂದಿಗೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ

Written by Soma Shekar

Published on:

---Join Our Channel---

ಪ್ರಪಂಚದ ಅನೇಕ ಭಾಗಗಳಲ್ಲಿ ಅನೇಕ ನಿಗೂಢವಾದ ಸ್ಥಳಗಳು ಇಂದಿಗೂ ಸಹಾ ನಿಗೂಢ ಅಥವಾ ರಹಸ್ಯಮಯವಾಗಿಯೇ ಉಳಿದು ಹೋಗಿವೆ. ಆದರೆ ಜನರಿಗೆ ಆ ಸ್ಥಳಗಳ ಬಗ್ಗೆ ತಿಳಿಯುವ ಆಸಕ್ತಿ ಮಾತ್ರ ಕಡಿಮೆಯಾಗಿಲ್ಲ. ಅಲ್ಲಿ ಅಡಗಿರುವ ರಹಸ್ಯಗಳನ್ನು ಬೇಧಿಸುವ ಪ್ರಯತ್ನವನ್ನು ಮಾಡದೇ ಹೋದರೂ, ಅಂತಹ ರಹಸ್ಯಮಯ ಸ್ಥಳಗಳ ಬಗ್ಗೆ ತಿಳಿಯುವ ಕುತೂಹಲ ಅನೇಕರಲ್ಲಿ ಉಳಿದಿರುವುದೇ ಆ ಸ್ಥಳಗಳು ಇನ್ನೂ ಜನಪ್ರಿಯತೆ ಪಡೆದುಕೊಂಡಿರುವುದಕ್ಕೆ ಪ್ರಮುಖವಾದ ಕಾರಣವಾಗಿದೆ. ಹಾಗಾದರೆ ಅಂತಹುದೇ ಒಂದು ರಹಸ್ಯಮಯ ಸ್ಥಳದ ಬಗ್ಗೆ ತಿಳಿಯೋಣ ಬನ್ನಿ.

ನಾವು ಹೇಳಲು ಹೊರಟಿರುವುದು ಬಿಹಾರ ದಲ್ಲಿರುವ ಒಂದು ಪ್ರವಾಸಿ ತಾಣವಾದ ರಾಜಗೀರ್ ನಲ್ಲಿ ಇರುವ ಗುಹೆಯೊಂದರಲ್ಲಿ ಇದೆ ಎನ್ನಲಾಗುವ ರಹಸ್ಯ ಬಾಗಿಲಿನ ಕುರಿತಾಗಿದೆ. ಹೌದು ಇಲ್ಲಿನ ಗುಹೆಯಲ್ಲಿ ಇರುವ ಬಾಗಿಲಿನ ಹಿಂದೆ ಚಿನ್ನದ ಭಂಡಾರವೇ ಇದೆ ಎನ್ನಲಾಗಿದೆ‌. ಸಾವಿರಾರು ಬಾರಿ ಈ ಬಾಗಿಲನ್ನು ತೆರೆಯುವ ಪ್ರಯತ್ನವನ್ನು ಮಾಡಲಾಗಿದೆಯಾದರೂ ಆ ಪ್ರಯತ್ನಗಳು ಸಫಲವಾಗಲೇ ಇಲ್ಲ ಎನ್ನಲಾಗಿದೆ. ಇನ್ನು ಇತಿಹಾಸಕಾರರ ಪ್ರಕಾರ ಹರ್ಯಾಂಕ ವಂಶದ ಸಂಸ್ಥಾಪಕ ಬಿಂಬಿಸಾರನಿಗೆ ಚಿನ್ನ ಮತ್ತು ಬೆಳ್ಳಿಯ ಮೇಲೆ ಅತೀವವಾದ ಆಸಕ್ತಿಯಿತ್ತು ಎನ್ನಲಾಗಿದೆ.

ಆ ಆಸಕ್ತಿಯಿಂದಲೇ ಅಪಾರವಾದ ಆಭರಣಗಳನ್ನು ಸಂಗ್ರಹಿಸಲಾಗುತ್ತಿತ್ತು ಎನ್ನಲಾಗಿದೆ. ರಾಜಗೀರ್ ನ ಈ ಗುಹೆಯಲ್ಲಿ ಬಿಂಬಿಸಾರನ ಅಪಾರವಾದ ಸಂಪತ್ತು ಇದೆ ಎನ್ನಲಾಗಿದೆ. ಈ ಅಪಾರ ಸಂಪತ್ತನ್ನು ಆತನ ಪತ್ನಿ ಇಲ್ಲಿ ಗುಪ್ತವಾಗಿ ಇರಿಸಿದ್ದಳೆನ್ನಲಾಗಿದೆ. ಆದರೆ ಇಲ್ಲಿಯವರೆಗೂ ಯಾರಿಗೂ ಸಹಾ ಈ ನಿಧಿಯ ಸುಳಿವು ಸಿಕ್ಕಿಲ್ಲ. ಬ್ರಿಟೀಷರು ಅವರ ಕಾಲದಲ್ಲಿ ಈ ಗುಹೆಯನ್ನು ಪ್ರವೇಶಿಸುವ ಪ್ರಯತ್ನವನ್ನು ಮಾಡಿದ್ದರೂ ಅವರ ಪ್ರಯತ್ನಗಳು ಸಹಾ ಯಶಸ್ಸನ್ನು ಪಡೆದುಕೊಳ್ಳಲಿಲ್ಲ. ಈ ಗುಹೆಯ ನಿರ್ಮಾಣವನ್ನು ಬಿಂಬಿಸಾರನ ಪತ್ನಿಯೇ ಮಾಡಿಸಿದ್ದು ಎನ್ನಲಾಗಿದ್ದು, ಈ ಗುಹೆಯ ಖಜಾನೆ ಇಂದಿಗೂ ಒಂದು ರಹಸ್ಯವಾಗಿಯೇ ಉಳಿದಿದೆ.

ಈ ಗುಹೆಯ ದ್ವಾರದ ಮೇಲೆ ಶಂಖ ಲಿಪಿಯಲ್ಲಿ ಏನನ್ನೋ ಬರೆಯಲಾಗಿದ್ದು, ಅದನ್ನು ಇದುವರೆಗೂ ಸಹಾ ಯಾರಿಂದಲೂ ಓದಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಅಲ್ಲದೇ ಈ ಲಿಪಿಯಲ್ಲಿ ಗುಹೆಯ ಬಾಗಿಲನ್ನು ತೆರೆದು ಒಳಗಿರುವ ಅಪಾರವಾದ ನಿಧಿಯನ್ನು ಹೇಗೆ ಪಡೆಯಬೇಕೆನ್ನುವ ವಿವರಗಳನ್ನು ಬರೆಯಲಾಗಿದೆ ಎಂದೂ ಸಹಾ ಹೇಳಲಾಗುತ್ತದೆ. ಪ್ರತಿ ವರ್ಷ ಅಸಂಖ್ಯಾತ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.

Leave a Comment