ತಮ್ಮ ಸುದೀರ್ಘವಾದ ಸಿನಿ ಜೀವನದ ಪಯಣದಲ್ಲಿ ಹಲವು ಏಳು ಬೀಳು ಗಳನ್ನು ಕಂಡು ಯಶಸ್ಸು ಹಾಗೂ ಜನಪ್ರಿಯತೆ ಪಡೆದುಕೊಂಡು ನವರಸ ನಾಯಕ ಎನ್ನುವ ಬಿರುದನ್ನು ಪಡೆದು ನಾಡಿನ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿರುವವರು ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರು. ಖಳ ನಟ ನಾಗಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು, ಹಾಸ್ಯ ನಟನಾಗಿ, ಯಶಸ್ವಿ ನಾಯಕ ನಟನಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಬಂದಿರುವ ಜಗ್ಗೇಶ್ ಅವರ ಜೀವನವೇ ಒಂದು ಅದ್ಭುತ ಕಥಾ ಸಾಗರ ಎಂದರೆ ತಪ್ಪಾಗಲಾರದು. ನಟ ಜಗ್ಗೇಶ್ ಅವರು ಪ್ರಸ್ತುತ ರಂಗ ನಾಯಕ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗುರುವಾರ ಈ ಸಿನಿಮಾದ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಅನೇಕ ವಿಚಾರಗಳನ್ನು ಹಂಚಿಕೊಂಡಿರುವ ನಟ ಜಗ್ಗೇಶ್ ಅವರು ಆ ದಿನಗಳಲ್ಲಿ ಕಲಾವಿದರ ನಡುವಿನ ಹೊಂದಾಣಿಕೆ ಹಾಗೂ ಹೇಗೆ ಒಬ್ಬರು ಮತ್ತೊಬ್ಬರಿಗೆ ಸಹಾಯ ನೀಡುತ್ತಿದ್ದರು ಎನ್ನುವ ಉತ್ತಮ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
ಜಗ್ಗೇಶ್ ಅವರು ಹಿಂದೊಮ್ಮೆ ತಾವು ರವಿಚಂದ್ರನ್ ಅವರಿಂದ ಸಹಾಯವನ್ನು ಪಡೆದಿದ್ದ ವಿಚಾರವನ್ನು ಹಂಚಿಕೊಳ್ಳುತ್ತಾ, ಒಮ್ಮೆ ಗಣಪತಿ ಹಬ್ಬದ ದಿನ ಅವರು ತಮ್ಮ ಪತ್ನಿಯ ಬಳಿ ಹಣ ಇದ್ಯಾ ಎಂದು ಕೇಳಿದಾಗ, ಅವರ ಪತ್ನಿ ಒಂದು ಇನ್ನೂರು ರೂಪಾಯಿ ಇರಬಹುದು ಎಂದಿದ್ರಂತೆ. ಆಗ ಜಗ್ಗೇಶ್ ಅವರು ರವಿಚಂದ್ರನ್ ಅವರನ್ನು ಕೇಳ್ತೀನಿ ಇರು ಎಂದವರೇ ಮನೆಯಿಂದ ಹೊರ ಬಂದರಂತೆ. ಆಗ ರವಿಚಂದ್ರನ್ ಅವರ ಜೊತೆ ಮಾತನಾಡೋಕೆ ನಮಗೆ ಭಯ ಆಗ್ತಿತ್ತು. ಅವರು ಸೆಟ್ ನಿಂದ ಹೊರಗೆ ಬರುವಾಗ ನಾನು ಬಾಗಿಲ ಬಳಿ ನಿಂತಿದ್ದೆ. ಆಗ ಅವರು ಏನೋ ಅಂತ ಕೇಳಿದ್ರು. ನಾನು ಆಗ ಸರ್ ನಾಳೆ ಹಬ್ಬ, ಒಂದಿನ್ನೂರು ರೂಪಾಯಿ ಇದ್ರೆ ಕೊಡಿ ಎಂದು ಕೇಳಿದೆ. ಅವರು ತಕ್ಷಣ, ಹೇ ಬಾಬು, ಅವನಿಗೆ ಐನೂರು ರೂಪಾಯಿ ಕೊಟ್ಟು ಕಳಿಸಿ ಎಂದು ಹೇಳಿದ್ದರು ಎಂದು ದಶಕಗಳ ಹಿಂದಿನ ಆ ಘಟನೆಯನ್ನು ಜಗ್ಗೇಶ್ ಅವರು ಸ್ಮರಿಸಿಕೊಂಡಿದ್ದಾರೆ.
ಈ ವೇಳೆ ಅವರು ತಾನು ಈ ವಿಷಯವನ್ನು ಹೇಳಿದ್ದು ಏಕೆ ಎನ್ನುವುದಾದರೆ, ನಮ್ಮ ಚಿತ್ರರಂಗ ಅಂತಹ ಸಹಾಯ ಮಾಡುವ ಗುಣವನ್ನು ಹೊಂದಿತ್ತು, ಅಂತಹ ಗುಣಗಳನ್ನು ನೋಡಿದವನು ನಾನು ಎಂದಿದ್ದಾರೆ. ಅಲ್ಲದೇ ಇದೇ ವೇಳೆ ಜಗ್ಗೇಶ್ ಅವರು ಪೇಮೆಂಟ್ ವಿಚಾರವಾಗಿ ತಾನು ಅಂಬರೀಶ್ ಹಾಗೂ ಪ್ರಭಾಕರ್ ಅವರನ್ನು ಸ್ಮರಿಸುತ್ತೇನೆ. ಆಗ ಅವರು ರೇಷನ್ ಗೆ ಸಮಸ್ಯೆಯಾಗಿದೆ, ಪ್ರೊಡ್ಯುಸರ್ ಪೇಮೆಂಟ್ ಕೊಟ್ಟಿಲ್ಲ ಎಂದಾಗ ಅವರು ಪ್ರೊಡ್ಯೂಸರ್ ನ ಕರೆದು ಬೈತಾ ಇದ್ರು, ಆ ಹುಡುಗ ಕೆಲಸ ಮಾಡ್ತಾನೆ, ದುಡ್ಡು ಕೊಡೋಕೆ ಏನಾಗಿದೆಯೆಂದು ಹೇಳ್ತಾ ಇದ್ರು. ಸೆಟ್ ಗೆ ಹೋದಾಗ ಕಲಾವಿದರು ನಮ್ಮನ್ನು ಆಪ್ಯಾಯತೆಯಿಂದ ಮಾತನಾಡಿಸಿ, ಕುಟುಂಬದ ಬಗ್ಗೆ ಕೇಳ್ತಾ ಇದ್ದರು ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.