ಅಂದು ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಹುಡುಗಿ ಇಂದು ವಿಶ್ವ ವಿಖ್ಯಾತ ಸೆಲೆಬ್ರಿಟಿ: ಒಂದು ಫೋಟೋ ಆಕೆಯ ಅದೃಷ್ಟ ಬದಲಿಸಿತ್ತು.
ವ್ಯಕ್ತಿಯೊಬ್ಬರ ಅದೃಷ್ಟ ಯಾವಾಗ? ಹೇಗೆ ? ಎಲ್ಲಿ? ಬದಲಾಗುತ್ತದೆ ಎಂದು ಯಾರಿಂದಲೂ ಸಹಾ ಹೇಳಲು ಸಾಧ್ಯವಿಲ್ಲ. ಒಂದೇ ಒಂದು ಫೋಟೊ ಸಹಾ ಒಬ್ಬರ ಜೀವನದ ದಿಕ್ಕನ್ನೇ ಬದಲಿಸಬಲ್ಲುವುದು ಎಂದರೆ ನಂಬುವುದಕ್ಕೆ ಕಷ್ಟ ಎನಿಸಬಹುದು, ಇಂತಹುದು ಸಿನಿಮಾಗಳಲ್ಲಿ ಸಾಧ್ಯ ಎನ್ನಬಹುದು. ಆದರೆ ನಿಜ ಜೀವನದಲ್ಲಿ ಸಹಾ ಇದು ಸಾಧ್ಯವಿದೆ ಎನ್ನುವುದಕ್ಕೆ ಒಂದು ಜೀವಂತ ಸಾಕ್ಷಿಯಾಗಿದ್ದಾರೆ ರೀಟಾ ಗವಿಯೋಲಾ. ಇಂದು ಸೆಲೆಬ್ರಿಟಿ ಎನಿಸಿಕೊಂಡಿರುವ ರೀಟಾ ಗವಿಯೋಲಾ ಕೆಲವು ವರ್ಷಗಳ ಹಿಂದೆ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದರೆ ಆಶ್ಚರ್ಯ ಆಗಬಹುದು. ಹೀಗೆ ಭಿಕ್ಷೆ ಬೇಡಿ ಹೊತ್ತಿನ ಬುತ್ತಿ ತುಂಬಿಸುತ್ತಿದ್ದ ಹುಡುಗಿ ಇಂದು ಫ್ಯಾಷನ್ ಐಕಾನ್ ಹಾಗೂ ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಯಾಗಿದ್ದು, ಆಕೆಯ ಈ ಜೀವನದ ಹಿಂದೆ ಒಂದು ರೋಚಕ ಕಥೆಯಿದೆ.
ಫಿಲಿಪೈನ್ಸ್ ನ ಲುಕ್ಬನ್ ನಗರ ವಾಸಿಯಾದ ರೀಟಾ ಅವರದ್ದು ಕಿತ್ತು ತಿನ್ನುವ ಬಡ ಕುಟುಂಬ. ತಂದೆ ತಾಯಿ ಬೇರೆಯವರ ಮನೆಗಳಲ್ಲಿ ಕೆಲಸಗಳನ್ನು ಮಾಡುತ್ತಾರೆ. ಐದು ಜನ ಒಡಹುಟ್ಟಿದವರು ಬೇರೆ. ಕುಟುಂಬ ನಿರ್ವಹಣೆಗೆ ರೀಟಾ ಬೀದಿ ಬೀದಿ ಅಲೆದು ಭಿಕ್ಷೆ ಬೇಡುತ್ತಿದ್ದಳು. ಈ ವೇಳೆ 2016 ರಲ್ಲಿ ಲುಕ್ಬನ್ ನಗರದಲ್ಲಿ ನಡೆದ ಒಂದು ಸ್ಥಳೀಯ ಉತ್ಸವದ ವೇಳೆ ರೀಟಾ ಉತ್ಸವ ನಡೆಯುತ್ತಿದ್ದ ಜಾಗಕ್ಕೆ ಏನಾದರೂ ಒಳ್ಳೆಯ ಭಿಕ್ಷೆ ಸಿಗಬಹುದು ಎಂದು ಅಲ್ಲಿಗೆ ಹೋಗಿದ್ದಾಳೆ. ಆಗ ಅಲ್ಲಿಗೆ ಬಂದಿದ್ದ ಫೋಟೋಗ್ರಾಫರ್ ಟೋಫರ್ ಕ್ವಿಂಟೋ ಈಕೆಯ ನೈಜ ಸೌಂದರ್ಯ ಕಂಡು ಬೆರಗಾಗಿ, ಆಕೆಯ ಫೋಟೋಗಳನ್ನು ತೆಗೆದಿದ್ದಾರೆ. ಅದೇ ಆಕೆಯ ಜೀವನದ ದಿಕ್ಕು ಬದಲಿಸಿ ಬಿಟ್ಟಿತು.
ಕ್ವಿಂಟೋ ರೀಟಾಳ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದರು, ಆ ಫೋಟೋಗಳಿಗೆ ಅಪಾರವಾದ ಮೆಚ್ಚುಗೆಗಳು ಹರಿದು ಬಂದವು. ರೀಟಾಳ ಫೋಟೋ ನೋಡಿ ಕೆಲವು ಕಂಪನಿಗಳ ಜಾಹೀರಾತಿನ ಅವಕಾಶ ಆಕೆಯನ್ನು ಅರಸಿ ಬಂದವು. ರೀಟಾಗ ಫ್ಯಾಷನ್ ಬ್ರಾಂಡ್ ಗಳಿಗೆ ರಾಯಭಾರಿಯಾದಳು, ಆರ್ಥಿಕ ಪರಿಸ್ಥಿತಿ ಕೂಡಾ ಸುಧಾರಿಸತೊಡಗಿತು. ಫಿಲಿಪೈನ್ಸ್ ದೇಶದಿಂದ ಸೌಂದರ್ಯ ಕಿರೀಟಗಳನ್ನು ಗೆದ್ದ ಮಾಡೆಲ್ ಗಳು ಸಹಾ ರೀಟಾಳ ಬ್ಯೂಟಿಯನ್ನು ಹೊಗಳಿದ್ದು ಆಕೆಯ ವರ್ಚಸ್ಸನ್ನು ಇನ್ನೂ ಹೆಚ್ಚಿಸಿತು. ರೀಟಾಳಿಗೆ ಜನಪ್ರಿಯ ರಿಯಾಲಿಟಿ ಶೊ ಬಿಗ್ ಬ್ರದರ್ ಗೂ ಅವಕಾಶ ಅರಸಿ ಬಂದಿತು.
ಹೀಗೆ ರೀಟಾ ಒಂದು ಫೋಟೋದಿಂದಾಗಿಯೇ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿ ಬಿಟ್ಟಳು. ಇನ್ನು ತಮ್ಮ ಅಂದವಾದ ಫೋಟೋಗಳನ್ನು ರೀಟಾ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಹೊಸ ಮನೆಯನ್ನು ನಿರ್ಮಾಣ ಮಾಡಿಸಿರುವ ರೀಟಾ ಅದರ ಒಂದು ವೀಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಾರೆ ಅದೃಷ್ಟ ಒಲಿದು ಬರಲು ಒಂದು ಫೋಟೋ ಕೂಡಾ ಕಾರಣ ಆಗಬಹುದು ಎನ್ನುವುದಕ್ಕೆ ರೀಟಾ ಜೀವನ ಒಂದು ಮಾದರಿಯಾಗಿದೆ.