ವರ ರಾಜಸ್ಥಾನ, ವಧು ಕಜಕಿಸ್ತಾನ, ಇವರ ಪ್ರೇಮ ವಿವಾಹಕ್ಕೆ ಸಾಕ್ಷಿಯಾಯ್ತು ಹಿಂದೂಸ್ತಾನ: ಹೀಗೊಂದು ವಿಶೇಷ ಪ್ರೇಮಕಥೆ

Written by Soma Shekar

Published on:

---Join Our Channel---

ಪ್ರೇಮ ಕುರುಡು ಎನ್ನುವ ಮಾತನ್ನು ಹೇಳುವುದನ್ನು ನಾವೆಲ್ಲರೂ ಸಹಾ ಸಹಜವಾಗಿಯೇ ಕೇಳಿದ್ದೇವೆ. ಏಕೆಂದರೆ ಪ್ರೇಮ ಪಾಶದಲ್ಲಿ ಬಿದ್ದವರು ಜಾತಿ, ಧರ್ಮ, ಭಾಷೆ, ವಯಸ್ಸು ಹೀಗೆ ಯಾವುದೇ ಬೇಧವಿಲ್ಲದೇ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಅಲ್ಲದೇ ತಮ್ಮ ತಂದೆ ತಾಯಿಯನ್ನು ಸಹಾ ಪ್ರೇಮಕ್ಕಾಗಿ ಬಿಟ್ಟು ಹೋದವರು ಬಹಳಷ್ಟು ಜನರಿದ್ದಾರೆ. ಕೆಲವೊಮ್ಮೆ ಪ್ರೇಮವು ದೇಶದ ಗಡಿಗಳನ್ನು ಸಹಾ ದಾಟಿ ಮೂಡುವುದುಂಟು. ಪ್ರಸ್ತುತ ವ್ಯಾಲೆಂಟೈನ್ಸ್ ಡೇ ಹತ್ತಿರವಾಗುವ ಜೊತೆಗೆ ಮದುವೆಗಳ ಸೀಸನ್ ಬೇರೆ ನಡೆಯುತ್ತಿದ್ದು ವಿವಿಧ ರೋಮ್ಯಾಂಟಿಕ್ ಹಾಗೂ ಪ್ರೇಮ ಪ್ರಸಂಗಗಳ ವಿಷಯ ಸುದ್ದಿಗಳಾಗಿ ಗಮನ ಸೆಳೆದಿವೆ.

ಪ್ರಸ್ತುತ ಅಂತಹುದೇ ಒಂದು ವಿಶಿಷ್ಠವಾದ ಪ್ರೇಮ ಕಥೆಯೊಂದು ಮದುವೆಯೊಂದಿಗೆ ಶುಭಾರಂಭವನ್ನು ಕಂಡಿದ್ದು, ರಾಜಸ್ಥಾನದ ಗಂಡು, ಕಜಕಿಸ್ತಾನದ ಹೆಣ್ಣು ಇಬ್ಬರ ‌ಮದುವೆಯ ಸುದ್ದಿಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜನರು ಕುತೂಹಲದಿಂದ ಈ ಪ್ರೇಮಿಗಳ ಪ್ರೇಮಕಥೆಯನ್ನು ತಿಳಿಯುವ ಆಸಕ್ತಿಯನ್ನು ತೋರಿ, ಮೆಚ್ಚುಗೆಯನ್ನು ನೀಡುತ್ತಿದ್ದಾರೆ. ಹಾಗಾದರೆ ಏನೀ ಪ್ರೇಮ ಕಥೆ ಎನ್ನುವ ವಿವರಗಳನ್ನು ತಿಳಿಯುವ ಆಸಕ್ತಿ ನಿಮ್ಮದಾದರೆ ಅದರ ಸಂಪೂರ್ಣ ಮಾಹಿತಿ ಇದೋ ಇಲ್ಲಿದೆ ನಿಮಗಾಗಿ.

ರಾಜಸ್ಥಾನದ ಸೀಕರ್ ನ ಶಿವಸಿಂಗಾಪುರ ಇಲಾಖೆಯ ಪಂಕಜ್ ಸೈನಿ ಎನ್ನುವ ಯುವಕ, ಕಜಕಿಸ್ತಾನದ ಯುವತಿ ತಾನಿಯಾ ಅವರನ್ನು ವಿವಾಹವಾಗಿದ್ದು, ಹಿಂದೂ ಸಂಪ್ರದಾಯದಂತೆ ಇವರ ಮದುವೆ ನೆರವೇರಿದೆ. ವೀಸಾ ಸಿಗದ ಕಾರಣ ತಾನಿಯಾ ಅವರ ಮನೆಯವರು ಯಾರೂ ಕೂಡಾ ಮದುವೆಗೆ ಆಗಮಿಸುವುದು ಸಾಧ್ಯವಾಗದ ಕಾರಣ, ಪಂಕಜ್ ಸೈನಿ ಅವರ ಅಣ್ಣನಿಗೆ ಹೆಣ್ಣು ಕೊಟ್ಟಿರುವ ಮಾವನೇ ಮುಂದೆ ನಿಂತು ತಾನಿಯಾ ಅವರ ಕನ್ಯಾದಾನವನ್ನು ಮಾಡಿದ್ದು, ಮದುವೆಯ ಖರ್ಚನ್ನು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ವಿವರಗಳಿಗೆ ಹೋದರೆ, ಸೀಕರ್ ನ ಶಿವಸಿಂಗಪುರದ ಬಳಿ ನೆಲೆಸಿರುವ ಯುವಕ ಪಂಕಜ್ ಸೈನಿ ಐರ್ಲೆಂಡ್ ನಲ್ಲಿ ಒಂದು ರೀಟೇಲ್ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಕಂಪನಿಯ ವಿಷಯವಾಗಿ ಅವರು ಒಮ್ಮೆ ಟರ್ಕಿಗೆ ಹೋಗಬೇಕಾಯಿತು. ಇದೇ ಸಂದರ್ಭದಲ್ಲಿ ಕಜಕಿಸ್ತಾನದ ನಿವಾಸಿಯಾದ ತಾನಿಯಾ ತಮ್ಮ ವೈದ್ಯಕೀಯ ಶಿಕ್ಷಣವನ್ನು ಮುಗಿಸಿ, ರಜಾ ದಿನಗಳಲ್ಲಿ ಸುತ್ತಾಡುವ ಸಲುವಾಗಿ ಟರ್ಕಿಗೆ ಬಂದಿದ್ದರು. ಹೀಗೆ ಟರ್ಕಿಯಲ್ಲಿ ಪಂಕಜ್ ಹಾಗೂ ತಾನಿಯಾ ಮೊದಲ ಭೇಟಿ ನಡೆಯಿತು.

ಲವ್ ಅಟ್ ಫಸ್ಟ್ ಸೈಟ್ ಎನ್ನುವ ಹಾಗೆ ಮೊದಲ ನೋಟದಲ್ಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿ ಹೋಯಿತು. ಆಗ ತಾನಿಯಾ ಪಂಕಜ್ ಅವರನ್ನು ಕಜಕಿಸ್ತಾನಕ್ಕೆ ಕರೆದುಕೊಂಡು ಹೋಗಿ ತಮ್ಮ ಕುಟುಂಬದವರಿಗೆ ಪರಿಚಯಿಸಿದರು, ಅವರ ಮನೆಯಲ್ಲಿ ಇವರ ಮದುವೆಗೆ ಅನುಮತಿ ಸಹಾ ದೊರೆಯಿತು. ಇದಾದ ನಂತರ ಪಂಕಜ್ 2019 ರಲ್ಲಿ ತಾನಿಯಾ ರನ್ನು ಭಾರತಕ್ಕೆ ಕರೆತಂದು ತಮ್ಮ ಕುಟುಂಬದವರಿಗೆ ಪರಿಚಯಿಸಿ ಪ್ರೇಮ ವಿಚಾರವನ್ನು ತಿಳಿಸಿದ ಮೇಲೆ, ಇಬ್ಬರಿಗೂ ಸಹಾ ನಿಶ್ಚಿತಾರ್ಥ ನಡೆಯಿತು. ಅನಂತರ ಕೆಲಸಗಳ ವಿಚಾರವಾಗಿ ಇಬ್ಬರೂ ವಿದೇಶಗಳಿಗೆ ತೆರಳಿದರು.

2020 ರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಲು ನಿರ್ಧರಿಸಿದರು. ಆದರೆ ಕೋವಿಡ್ ನ ಕಾರಣದಿಂದ ತಾನಿಯಾಗೆ ಭಾರತಕ್ಕೆ ಬರುವುದಕ್ಕೆ ಅನುಮತಿ ಸಿಗಲಿಲ್ಲ. ಕಳೆದ ವರ್ಷ ಡಿಸೆಂಬರ್ ನಲ್ಲಿ ವೀಸಾ ದೊರೆತು ಸೀಕರ್ ಗೆ ಬಂದರು. ಆದರೆ ಅವರ ಕುಟುಂಬದವರಿಗೆ ಮಾತ್ರ ವೀಸಾ ದೊರೆಯದ ಕಾರಣ ತಾನಿಯಾ ಅವರ ತಂದೆ ತಾಯಿಗೆ ಮಗಳ ಮದುವೆಗೆ ಹಾಜರಾಗುವುದು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಪಂಕಜ್ ಅವರ ಅಣ್ಣನ ಮಾವ ಮಹಾವೀರ್ ಸೈನಿ ಅವರು ತಾವೇ ಕನ್ಯಾದಾನ ಮಾಡಿ ಮದುವೆ ಜವಾಬ್ದಾರಿ ನಿಭಾಯಿಸಿದ್ದಾರೆ.

Leave a Comment