ಮಿಸ್ ಯೂನಿವರ್ಸ್ ಕಿರೀಟ: ವಿಶ್ವದ ದುಬಾರಿ ಸೌಂದರ್ಯ ಕಿರೀಟದ ಬೆಲೆ ಹಾಗೂ ವಿಶೇಷತೆ ಏನು ಗೊತ್ತಾ??

Written by Soma Shekar

Published on:

---Join Our Channel---

ಡಿಸೆಂಬರ್ 12 ರಂದು ಭಾರತಕ್ಕೆ ಒಂದು ವಿಶೇಷ ದಿನವಾಗಿತ್ತು,‌ ಇದಕ್ಕೆ ಕಾರಣ 21 ವರ್ಷಗಳ ನಂತರ ಭಾರತೀಯ ಯುವತಿಯೊಬ್ಬರು ಮತ್ತೊಮ್ಮೆ ವಿಶ್ವ ಸುಂದರಿ ಅಥವಾ ಮಿಸ್ ಯೂನಿವರ್ಸ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡರು. ಹರ್ನಾಜ್ ಸಂಧು ವಿಶ್ವಸುಂದರಿ 2021 ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದ್ದು ಮಾತ್ರವೇ ಅಲ್ಲದೇ ವಿಶ್ವದ ಅತ್ಯಂತ ದುಬಾರಿ ಬೆಲೆಯ, ವಿಶಿಷ್ಟತೆಯ ಸಂಕೇತವಾದ ಕಿರೀಟವನ್ನು ಧರಿಸುವ ಮೂಲಕ ಮಿಂಚಿದರು.

ಹಾಗಾದರೆ ಭಾರತೀಯ ಸುಂದರಿ ಧರಿಸಿದ ಈ ಕಿರೀಟದ ವಿಶೇಷವೇನು?? ಕುತೂಹಲಕಾರಿ ಮಾಹಿತಿಗಳನ್ನು ತಿಳಿಯೋಣ ಬನ್ನಿ. ಹರ್ನಾಜ್ ಸಂಧು ತಮ್ಮ ಮುಡಿಗೇರಿಸಿಕೊಂಡ ಮಿಸ್ ಯೂನಿವರ್ಸ್ ಕಿರೀಟದ ಬೆಲೆ ಬರೋಬ್ಬರಿ 37 ಕೋಟಿ ರೂ. ಗಳಾಗಿವೆ. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಒಂದೇ ವಿನ್ಯಾಸದ ಕಿರೀಟವನ್ನು ಬಳಸುತ್ತಿಲ್ಲ. ಈ ಹಿಂದೆ ಹಲವು ಬಾರಿ ಕಿರೀಟಗಳನ್ನು ಬದಲಾವಣೆ ಮಾಡಲಾಗಿದೆ‌.

ಅದೇ ರೀತಿಯಲ್ಲಿ 2019 ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ಬದಲಾಯಿಸಲಾಯಿತು. ಕಿರೀಟ ಸಿದ್ದಪಡಿಸುವ ಹೊಣೆಯನ್ನು ಮೌವದ್ ಆಭರಣ ಕಂಪನಿಗೆ ವಹಿಸಲಾಗಿತ್ತು. ಈ ಕಂಪನಿಯು ಪವರ್ ಆಫ್ ಯೂನಿಟಿ ಕ್ರೌನ್ ಹೆಸರಿನಲ್ಲಿ ಮಿಸ್ ಯುನಿವರ್ಸ್ ಕಿರೀಟವನ್ನು ವಿನ್ಯಾಸಗೊಳಿಸಿತು. ಇದು ಮಹಿಳಾ ಸಬಲೀಕರಣ, ಶಕ್ತಿ ಸಮುದಾಯವನ್ನು ಪ್ರತಿನಿಧಿಸುವ ಸ‌ಂಕೇತವಾಗಿ ಸಿದ್ಧವಾಗಿತ್ತು.

ಈ ಕಿರೀಟವು ಮಹತ್ವಾಕಾಂಕ್ಷೆ, ವೈವಿದ್ಯತೆ, ಸಮುದಾಯ ಹಾಗೂ ಸೌಂದರ್ಯದ ಸಂಕೇತವೂ ಆಗಿದ್ದು, ಮೊದಲಿಗೆ 2019 ರಲ್ಲಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ ಮತ್ತು 2021 ರಲ್ಲಿ ಮೆಕ್ಸಿಕೋದ ಆ್ಯಂಡ್ರಿಯಾ ಮೆಜಾ ಧರಿಸಿದ್ದರು. ಈಗ ಹರ್ನಾಜ್ ಸಂಧು ಅವರು ಹೊಸ ವಿನ್ಯಾಸದ, ದುಬಾರಿ ಸೌಂದರ್ಯ ಕಿರೀಟ ಧರಿಸಿದ ಸುಂದರಿಯಾಗಿದ್ದಾರೆ. ಇನ್ನು ಈ ಕಿರೀಟದಲ್ಲಿ ಬಳಸಲಾಗಿರುವ ಅಮೂಲ್ಯ ವಸ್ತುಗಳ ಬಗ್ಗೆ ತಿಳಿಯೋಣ.

ಈ ಕಿರೀಟದಲ್ಲಿ 1,725 ಬಿಳಿಯ ವಜ್ರಗಳನ್ನು ಹಾಗೂ ಮೂರು ಕ್ಯಾನರಿ ವಜ್ರಗಳನ್ನು ಅಳವಡಿಸಲಾಗಿದೆ. ವಿನ್ಯಾಸದಲ್ಲಿ ಕಾಣುವ ಬಳ್ಳಿ, ಎಲೆಗಳು, ದಳಗಳು ಏಳು ಖಂಡಗಳನ್ನು ಪ್ರತಿನಿಧಿಸುತ್ತದೆ. ಕಿರೀಟದ ಮಧ್ಯ ಭಾಗದ ಕ್ಯಾನರಿ ವಜ್ರವು 62.83 ಕ್ಯಾರೆಟ್ ತೂಕವನ್ನು ಹೊಂದಿದೆ ಎನ್ನಲಾಗಿದೆ. ಈ ಕಿರೀಟವು ವಿಶ್ವದ ಅತ್ಯಂತ ದುಬಾರಿ ಸೌಂದರ್ಯ ಕಿರೀಟವಾಗಿದೆ.

Leave a Comment