ಮದುವೆಗೆ ಕರೆದು ಅವಮಾನ ಮಾಡ್ತೀಯಾ? ವರನ ಮೇಲೆ ಸ್ನೇಹಿತ ಮೊಕದ್ದಮೆ ಹೂಡಿ ಕೇಳಿದ ಪರಿಹಾರವೆಷ್ಟು ಗೊತ್ತಾ??

Written by Soma Shekar

Published on:

---Join Our Channel---

ಮದುವೆ ಸಮಾರಂಭ ಎಂದರೆ ಸ್ನೇಹಿತರು ಹಾಗೂ ಬಂಧುಗಳ ಜೊತೆಯಲ್ಲಿ ಬಹಳ ಸಂಭ್ರಮದಿಂದ ನಡೆಯುವ ಕಾರ್ಯಕ್ರಮವಾಗಿರುತ್ತದೆ. ಆದ್ದರಿಂದಲೇ ಮದುವೆ ಸಮಾರಂಭವನ್ನು ಜೀವನಪರ್ಯಂತ ಒಂದು ಮಧುರವಾದ ಸ್ಮರಣೆಯನ್ನಾಗಿ ಮಾಡಿಕೊಳ್ಳಬೇಕು ಎನ್ನುವ ಆಸೆಯಿಂದ ಅನೇಕರು ಮದುವೆಗಾಗಿ ವಿಶೇಷ ಪ್ಲಾನ್ ಗಳನ್ನು ಮಾಡಿಕೊಳ್ಳುತ್ತಾರೆ. ಇಲ್ಲೊಬ್ಬ ವರನು ಸಹಾ ತನ್ನ ಮದುವೆ ಕೂಡ ಬಹಳ ವಿಶೇಷವಾಗಿ ಇರಬೇಕೆಂದು ಪ್ಲಾನ್ ಮಾಡಿದ್ದಾನೆ. ಮದುವೆ ಮಂಟಪಕ್ಕೆ ಮೆರವಣಿಗೆ ಹೋಗುವ ವೇಳೆ ತನ್ನ ಎಲ್ಲಾ ಸ್ನೇಹಿತರು ಜೊತೆಗೆ ಇರಬೇಕೆಂದು ಯೋಜನೆಯೊಂದನ್ನು ಮಾಡಿಕೊಂಡಿದ್ದಾನೆ.

ಈ ವಿಚಾರವಾಗಿ ಆತ ತನ್ನ ಒಬ್ಬ ಸ್ನೇಹಿತನ ಸಹಾಯವನ್ನು ಪಡೆದುಕೊಂಡು, ತನ್ನ ಎಲ್ಲಾ ಸ್ನೇಹಿತರಿಗೂ ಬಾರಾತ್ ನಲ್ಲಿ ( ಮದುವೆ ಮಂಟಪಕ್ಕೆ ವರನು ಹೋಗುವ ಮೆರವಣಿಗೆ ) ಭಾಗವಹಿಸುವಂತೆ ಆಹ್ವಾನವನ್ನು ನೀಡಿದ್ದಾನೆ. ಆದರೆ ಆಹ್ವಾನ ನೀಡಿದ ವರನು, ಮದುವೆಯ ದಿನ ಸ್ನೇಹಿತರೆಲ್ಲರೂ ಬರುವವರೆಗೆ ಕಾಯದೇ ಕಲ್ಯಾಣಮಂಟಪಕ್ಕೆ ಹೊರಟು ಹೋಗಿರುವ ಘಟನೆಯೊಂದು ನಡೆದಿದೆ. ಹೌದು, ಈ ಘಟನೆಯು ಉತ್ತರಾಖಂಡದ ಹರಿದ್ವಾರ ಪ್ರಾಂತ್ಯದ ಬಹದ್ದೂರಾಬಾದ್ ಎನ್ನುವ ಕಡೆ ನಡೆದಿದೆ. ಆದರೆ ವಿಷಯ ಇಷ್ಟಕ್ಕೇ ಮುಗಿದಿಲ್ಲ ಮುಂದೆ ನಡೆದಿದ್ದು ಇದೀಗ ದೊಡ್ಡ ಸುದ್ದಿಯಾಗಿದೆ.

ಬಹದ್ದೂರಾಬಾದ್ ಎನ್ನುವ ಗ್ರಾಮಕ್ಕೆ ಸೇರಿದ ರವಿ ಎನ್ನುವ ಯುವಕನ ಮದುವೆ ಇತ್ತೀಚೆಗಷ್ಟೆ ನಡೆದಿದೆ. ಆತ ಮದುವೆಯ ದಿನ ಮಂಟಪಕ್ಕೆ ಗಂಡು ಮೆರವಣಿಗೆ ಮೂಲಕ ಸಂಜೆ 5 ಗಂಟೆಗೆ ಹೊರಡಲಿದ್ದು, ಆ ವೇಳೆಗೆ ತನ್ನ ಸ್ನೇಹಿತರೆಲ್ಲರಿಗೂ ಬಂದು ಮೆರವಣಿಗೆಯಲ್ಲಿ ಭಾಗವಹಿಸುವಂತೆ ಆಹ್ವಾನವನ್ನು ನೀಡಿದ್ದಾನೆ. ಸ್ನೇಹಿತರು ಕೂಡಾ ಅದಕ್ಕೆ ಒಪ್ಪಿಕೊಂಡು, ಮದುವೆ ದಿನ ಎಲ್ಲರೂ ವರನು ತಿಳಿಸಿದಂತೆ ನಿಗಧಿತ ಸಮಯಕ್ಕೆ ವರನ ಮನೆಯನ್ನು ತಲುಪಿದ್ದಾರೆ.

ಆದರೆ ಸ್ನೇಹಿತರು ಅಲ್ಲಿಗೆ ಬರುವ ವೇಳೆಗೆ ವರನು ಅಲ್ಲಿರಲಿಲ್ಲ. ಆತನು ಕುಟುಂಬ ಹಾಗೂ ಬಂಧುಗಳ ಜೊತೆಗೆ ಮದುವೆ ಮಂಟಪಕ್ಕೆ ಹೊರಟು ಹೋಗಿದ್ದನು ಎನ್ನಲಾಗಿದೆ. ಆಗ ಸ್ನೇಹಿತರು ಕೋಪಗೊಂಡು ವರನಿಗೆ ಕರೆ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಆಗ ವರನು ನೀವು ಬರುವುದು ತಡವಾಗಿದ್ದರಿಂದ ನಾವೆಲ್ಲ ಮಂಟಪಕ್ಕೆ ಹೊರಟು ಬಂದೆವು ಎಂದು ಕಾರಣವನ್ನು ನೀಡಿದ್ದಾನೆ. ಆದರೆ ಈ ಸಮಾಜಾಯಿಷಿಯಿಂದ ಚಂದ್ರಶೇಖರ ಎನ್ನುವ ಸ್ನೇಹಿತ ಮಾತ್ರ ಸಮಾಧಾನಗೊಂಡಿಲ್ಲ, ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ.

ರವಿಯ ಸ್ನೇಹಿತನಾಗಿರುವ ಚಂದ್ರಶೇಖರ್ ಕೋಪದಿಂದ ವಕೀಲರನ್ನು ಸಂಪರ್ಕಿಸಿ ಸ್ನೇಹಿತರನ್ನು ಬಿಟ್ಟು ಮದುವೆಗೆ ಹೊರಟಿದ್ದು ಮಾತ್ರವಲ್ಲದೇ ಎಲ್ಲರನ್ನೂ ಕರೆತರಲು ನನಗೆ ಕೆಲಸ ನೀಡಿ, ಅನಂತರ ನನ್ನ ಗೌರವಕ್ಕೆ ಧಕ್ಕೆ ಎನ್ನುವ ಉಂಟುಮಾಡಿರುವ ವರನು 50 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಮದುವೆಗೆ ಸ್ನೇಹಿತರನ್ನು ಕರೆತರಲು ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ಆದರೆ ವರನು ಮಾಡಿದ ಕೆಲಸದಿಂದ ನನಗೆ ಮಾನಸಿಕವಾಗಿ ಹಿಂಸೆಯಾಗಿದೆ ಎಂದು ಚಂದ್ರಶೇಖರ್ ದೂರನ್ನು ನೀಡಿದ್ದಾರೆ.

Leave a Comment