ಮತ್ತೊಂದು ಸಲಿಂಗಿ ಜೋಡಿ ವಿವಾಹಕ್ಕೆ ಸಿದ್ಧತೆ: ರಿಂಗ್ ಬದಲಿಸಿಕೊಂಡ ಮಹಿಳಾ ವೈದ್ಯರು

Written by Soma Shekar

Published on:

---Join Our Channel---

ಇತ್ತೀಚಿಗಷ್ಟೇ ಹೈದರಾಬಾದಿನಲ್ಲಿ ಸಲಿಂಗಿ ಪುರುಷ ಜೋಡಿಯೊಂದು ತಮ್ಮ ಕುಟುಂಬ, ಬಂಧುಗಳು ಹಾಗೂ ಸ್ನೇಹಿತರ ಮುಂದೆ ತಮ್ಮ ಸಂಬಂಧಕ್ಕೆ ವಿವಾಹದ ರೂಪವನ್ನು ನೀಡಿದ ವಿಷಯ ಎಲ್ಲೆಲ್ಲೂ ಸುದ್ದಿಯಾಗಿತ್ತು. ಆ ಜೋಡಿ ಕೂಡಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ವಿವಾಹದ ಫೋಟೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹಾ ಆಗುವ ಮೂಲಕ ಎಲ್ಲರ ಗಮನ ಸೆಳೆದು, ಅದರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈಗ ಅದರ ಬೆನ್ನಲ್ಲೇ ಇನ್ನೊಂದು ಸಲಿಂಗಿ ವಿವಾಹಕ್ಕೆ ಸಿದ್ಧತೆ ನಡೆದಿದೆ.

ಇತ್ತೀಚಿಗೆ ನಾಗಪುರದ ಮಹಿಳಾ ವೈದ್ಯರಿಬ್ಬರು ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದರು, ಈ ಜೋಡಿ ಗೋವಾದಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಈ ಮಹಿಳಾ ಸಲಿಂಗಿ ಜೋಡಿಯು ತಮ್ಮ ಉಂಗುರ ಬದಲಾವಣೆಯ ಸಂದರ್ಭವನ್ನು ಬದ್ಧತೆಯ ಉಂಗುರ ಬದಲಾವಣೆ ಎಂದು ಕರೆದಿದ್ದಾರೆ. ಜೀವನ ಪೂರ್ತಿ ಅವರು ಜೊತೆಯಾಗಿರುವ ಶಪಥವನ್ನು ಮಾಡಿದ್ದು, ಈಗ ಗೋವಾದಲ್ಲಿ ಮದುವೆಯಾಗಲು ನಿರ್ಧರಿಸಿದ್ದು, ಅವರ ಮದುವೆಯನ್ನು ಸಿವಿಲ್ ಯೂನಿಯನ್ ಎಂದು ಹೆಸರಿಸಲಾಗುವುದು ಎನ್ನಲಾಗಿದೆ.

ವೈದ್ಯೆಯರಾದ ಸುರ್ಭಿ ಮಿತ್ರಾ ಮತ್ತು ಪರೋಮಿತಾ ಮುಖರ್ಜಿ ಈಗ ವಿವಾಹವಾಗಲು ಸಜ್ಜಾಗಿರುವ ಸಲಿಂಗಿ ಜೋಡಿಯಾಗಿದ್ದಾರೆ. ಇವರು ಇತ್ತೀಚಿಗಷ್ಟೇ ನಾಗಪುರದಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೊಲ್ಕೊತ್ತಾದ ಮಾನಸಿಕ ಆರೋಗ್ಯ ಸಮ್ಮೇಳನದಲ್ಲಿ ಇವರು ಮೊದಲ ಬಾರಿಗೆ ಭೇಟಿಯಾಗಿದ್ದರು ಎನ್ನಲಾಗಿದೆ. ಆಗ ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದ ಅವರ ನಡುವೆ ಅನಂತರ ಸ್ನೇಹ, ಪ್ರೇಮ ಚಿಗುರಿ ಅದು ಈಗ ಮದುವೆಯ ಹಂತಕ್ಕೆ ಬಂದಿದೆ.

ಪರೋಮಿತಾ ಮುಖರ್ಜಿ ಮಾತನಾಡುತ್ತಾ ತನ್ನ ತಂದೆಗೆ ತನ್ನ ದೃಷ್ಟಿಕೋನದ ಬಗ್ಗೆ ತಿಳಿದಿತ್ತು, ಆದರೆ ತಾಯಿಗೆ ನಾನು ಹೇಳಿದಾಗ ಅವರಿಗೆ ಶಾ ಕ್ ಆಗಿತ್ತು. ಆದರೆ ನಂತರ ಅವರು ನನ್ನ ಸಂತೋಷಕ್ಕಾಗಿ ಎಲ್ಲವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಸಲಿಂಗ ವಿವಾಹಕ್ಕೆ ಇನ್ನೂ ಕಾನೂನಿನ ಮಾನ್ಯತೆ ದೊರೆತಿಲ್ಲವಾದರೂ ಸಲಿಂಗಿಗಳು ತಮ್ಮ ಪ್ರೀತಿ ಪಾತ್ರರ ಜೊತೆಗೆ ಬದುಕು ಕಟ್ಟಿಕೊಳ್ಳುವುದು ಮಾತ್ರ ಇತ್ತೀಚಿಗೆ ನಡೆಯುತ್ತಿದೆ.

Leave a Comment