ಪುನೀತ್ ರಾಜ್‍ಕುಮಾರ್ ಗಾಗಿ ಒಂದಾಗಲಿದೆ ಇಡೀ ದಕ್ಷಿಣ ಸಿನಿಮಾ ರಂಗ

Written by Soma Shekar

Published on:

---Join Our Channel---

ಅಪ್ಪು ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಮಂಕು ಕವಿದಂತಾಗಿದೆ. ಅಪ್ಪು ಅವರು ಚಿತ್ರೋದ್ಯಮವನ್ನು ತನ್ನ ಚಟುವಟಿಕೆಗಳ ಮೂಲಕವೇ ಆವರಿಸಿದ್ದ ವ್ಯಕ್ತಿ. ಅವರು ನಿಧನರಾಗಿ ಆರು ದಿನಗಳು ಕಳೆದರೂ ಇನ್ನೂ ಅನೇಕರು ಅವರನ್ನು ಸ್ಮರಿಸುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಅವರ ಫೋಟೋಗಳು, ವೀಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ. ಅವರ ಕಾರ್ಯಗಳನ್ನು ಸ್ಮರಿಸುತ್ತಿದ್ದಾರೆ. ಇವೆಲ್ಲವುಗಳ ಬೆನ್ನಲ್ಲೇ ಕರ್ನಾಟಕ ಚಿತ್ರೋದ್ಯಮವು ಪುನೀತ್ ಗೆ ನಮನವನ್ನು ಸಲ್ಲಿಸಲು ವೇದಿಕೆಯೊಂದನ್ನು ಸಿದ್ಧಪಡಿಸುತ್ತಿದೆ. ಪುನೀತ್ ಅವರಿಗಾಗಿ ದಕ್ಷಿಣ ಸಿನಿಮಾ ರಂಗ ಒಂದಾಗಲಿದೆ.

ಚಲನ ಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನವೆಂಬರ್ 16 ರಂದು ಪುನೀತ್ ನಮನ ಎನ್ನುವ ಕಾರ್ಯಕ್ರಮವನ್ನು ನಡೆಸಲು ಸಜ್ಜಾಗುತ್ತಿದ್ದು, ಇದರಲ್ಲಿ ಇಡೀ ಚಿತ್ರರಂಗ ಭಾಗಿಯಾಗಲಿದೆ ಎನ್ನಲಾಗಿದೆ. ಇಡೀ ಚಿತ್ರರಂಗ ಒಂದಾಗಿ ಪುನೀತ್ ಅವರನ್ನು ನೆನಪಿಸಿಕೊಂಡು, ಅವರಿಗೆ ನಮನವನ್ನು ಸಲ್ಲಿಸಲಿದ್ದಾರೆ. ಮಾದ್ಯಮವೊಂದಕ್ಕೆ ಸಾ.ರಾ.ಗೋವಿಂದು ಅವರು ಈ ವಿಷಯವನ್ನು ಹಂಚಿಕೊಂಡು, ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರೋದ್ಯಮದ ಎಲ್ಲಾ ಪ್ರಮುಖರು ಹಾಗೂ ಮಾನ್ಯ ಮುಖ್ಯಮಂತ್ರಿ ಯವರು ಅವರ ಸಚಿವ ಸಂಪುಟದ ಗಣ್ಯರು ಉಪಸ್ಥಿತರಿರುವರೆಂದು ತಿಳಿಸಿದ್ದಾರೆ.

ಪುನೀತ್ ನಮನ ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಅವರು ಅಪ್ಪು ಅವರ ಬಗ್ಗೆ ಬರೆದಿರುವ ಹಾಡನ್ನು ಪ್ರಸ್ತುತ ಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಪುನೀತ್ ಅವರ ಸಿನಿಮಾಗಳ ಹಾಡುಗಳನ್ನು ಸುಪ್ರಸಿದ್ಧ ಗಾಯಕರು ಹಾಡುವ ಮೂಲಕ ಪುನೀತ್ ಅವರನ್ನು ಸ್ಮರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಕನ್ನಡ ಸಿನಿ ರಂಗದ ಗಣ್ಯರು ಮಾತ್ರವೇ ಅಲ್ಲದೇ ನೆರೆ ಹೊರೆಯ ಸಿನಿ ರಂಗದ ಗಣ್ಯರು ಸಹಾ ಭಾಗವಹಿಸಲಿದ್ದು, ಅರಮನೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ನೆರೆಯ ಚಿತ್ರೋದ್ಯಮದವರಿಗೆ ಆಹ್ವಾನವನ್ನು ನೀಡಲು ಸಾ.ರಾ.ಗೋವಿಂದ್ ಹಾಗೂ ಒಂದು ಸಮಿತಿ ತೆರಳಲಿದ್ದು, ನೆರೆಯ ಚಿತ್ರರಂಗದ ಸ್ಟಾರ್ ನಟರು ಹಾಗೂ ಪುನೀತ್ ಅವರ ಆಪ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ತಿಳಿಸಿದ್ದಾರೆ. ಈ ವಿಷಯವನ್ನು ಈಗಾಗಲೇ ಶಿವರಾಜ್ ಕುಮಾರ್ ಅವರಿಗೂ ತಿಳಿಸಲಾಗಿದೆ. ಇಡೀ ರಾಜ್ ಕುಟುಂಬ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

Leave a Comment