ತಿರುಪತಿ ಶ್ರೀ ವೆಂಕಟೇಶ್ವರನ ದರ್ಶನ ಫಲ ಸಿಗಬೇಕೆಂದರೆ ಮೊದಲು ಈ ದೇವರ ದರ್ಶನ ಮಾಡಿ

Written by Soma Shekar

Published on:

---Join Our Channel---

ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ನ ಸನ್ನಿದಾನವನ್ನು ಭೂಲೋಕ ವೈಕುಂಠ ಎಂದೇ ಕರೆಯಲಾಗುತ್ತದೆ. ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುಗ ಪ್ರತ್ಯಕ್ಷ ದೈವವೆಂದು ಆರಾಧಿಸಲಾಗುತ್ತದೆ‌. ಅನಂತ ಭಕ್ತ ವೃಂದವು ಲಕ್ಷಗಳ ಸಂಖ್ಯೆಯಲ್ಲಿ ಶ್ರೀ ಸ್ವಾಮಿಯ ದರ್ಶನಕ್ಕೆ ಪ್ರತಿದಿನವೂ ಸಹಾ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಹೀಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತವೃಂದಕ್ಕೆ ಸ್ವಾಮಿ ದರ್ಶನ ಮಾಡುವ ಕೆಲವು ವಿಧಿ ವಿಧಾನಗಳ ಬಗ್ಗೆ ತಿಳಿದಿಲ್ಲ. ಭಕ್ತಿಯೇ ಮುಖ್ಯ ಎನ್ನುವುದು ವಾಸ್ತವ ಆದರೂ, ಕ್ಷೇತ್ರ ದರ್ಶನದ ನಿಯಮ ಪಾಲನೆ ಮಾಡಿದರೆ ಪುಣ್ಯ ಫಲ ದಕ್ಕುವುದು ಎನ್ನುವುದು ನಂಬಿಕೆ.

ತಿರುಮಲದಲ್ಲಿ ಶ್ರೀವೆಂಕಟೇಶ್ವರ ಸ್ವಾಮಿಯು ನೆಲೆಸಿರುವುದು ವಾಸ್ತವ, ಆದರೆ ಈ ಕ್ಷೇತ್ರದ ಒಡೆಯ, ಕ್ಷೇತ್ರ ಪಾಲಕ ಶ್ರೀ ವರಾಹ ಸ್ವಾಮಿ ಎನ್ನುವುದು ಪೌರಾಣಿಕ ಹಿನ್ನೆಲೆ. ಶ್ರೀಮನ್ನಾರಾಯಣನು ಶ್ರೀನಿವಾಸನ ರೂಪದಲ್ಲಿ ಭೂಮಿಗೆ ಬರುವ ಮೊದಲೇ ಈ ಕ್ಷೇತ್ರವು ವರಾಹ ಸ್ವಾಮಿಯವರ ಒಡೆತನದಲ್ಲಿ ಇತ್ತು. ಶ್ರೀವೆಂಕಟೇಶ್ವರನು ವರಾಹ ಸ್ವಾಮಿಯ ಬಳಿ ನೂರು ಅಡಿಗಳ ಜಾಗವನ್ನು ಬಹುಮಾನವಾಗಿ ಪಡೆದುಕೊಂಡನು. ಅಲ್ಲದೇ ಅದರ ಪ್ರತಿಯಾಗಿ ವರಾಹ ಸ್ವಾಮಿಗೆ ಒಂದು ಭರವಸೆಯನ್ನು ಸಹಾ ನೀಡಿದರು.

ಅದೇನೆಂದರೆ ಕಲಿಯುಗದಲ್ಲಿ ತನ್ನನ್ನು ದರ್ಶನ ಮಾಡಲು ಬರುವ ಭಕ್ತರು ಮೊದಲು ವರಾಹ ಸ್ವಾಮಿಯ ದರ್ಶನವನ್ನು ಮಾಡಬೇಕೆಂದು. ತಿರುಮಲದಲ್ಲಿ ಮೊದಲು ನೆಲೆಸಿದ ದೇವರು ವರಾಹ ಸ್ವಾಮಿ. ಅದಕ್ಕೆ ಆ ಸ್ಥಳವು ವೆಂಕಟಾಚಲ ವರಾಹ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ತಿರುಮಲದಲ್ಲಿ ಶ್ರೀ ಸ್ವಾಮಿಯವರ ದೇಗುಲದ ಕಲ್ಯಾಣಿಯಿಂದ ವಾಯುವ್ಯ ದಿಕ್ಕಿಗೆ ವರಾಹ ಸ್ವಾಮಿ ಆಲಯವಿದ್ದು, ಅದು ಪೂರ್ವಾಭಿಮುಖವಾಗಿರುವ ಆಲಯವಾಗಿದೆ.

ತನಗೆ ಜಾಗವನ್ನು ಕೊಟ್ಟ ಕಾರಣಕ್ಕಾಗಿ ಶ್ರೀವೆಂಕಟೇಶ್ವರ ಸ್ವಾಮಿಯು ವರಾಹನಿಗೆ ಮೊದಲ ಪೂಜೆ, ಅರ್ಚನೆ, ನೈವೇದ್ಯ ಆಗಬೇಕೆಂದು ಒಂದು ಕರಾರನ್ನು ಸಹಾ ಮಾಡಿಕೊಂಡಿದ್ದಾರೆ. ಆ ಕರಾರು ಪತ್ರವು ಇಂದಿಗೂ ಸಹಾ ವರಾಹ ಸ್ವಾಮಿ ದೇವಸ್ಥಾನದಲ್ಲಿ ಭದ್ರವಾಗಿ ಇರಿಸಲಾಗಿದೆ. ಶ್ರೀವೆಂಕಟೇಶ್ವರ ಸ್ವಾಮಿಯು ಇಂತಹುದೊಂದು ಮಾತನ್ನು ವರಾಹ ಸ್ವಾಮಿಗೆ ನೀಡಿರುವುದರಿಂದಲೇ ತಿರುಮಲಕ್ಕೆ ಹೋದಾಗ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೂ ಮೊದಲು ವರಾಹನ ದರ್ಶನ ಮಾಡಿದರೆ ಕ್ಷೇತ್ರ ದರ್ಶನದ ಫಲ ಸಂಪೂರ್ಣವಾಗಿ ಪ್ರಾಪ್ತಿಸುವುದು.

Leave a Comment