“ಅಮೃತದಂತ ಎದೆ ಹಾಲು ದಾನ ಮಾಡಿ, ಮಕ್ಕಳ ಜೀವ ಉಳಿಸಿ” ರಾಧಿಕಾ ಪಂಡಿತ್ ಮಹತ್ವದ ಸಂದೇಶ

Written by Soma Shekar

Published on:

---Join Our Channel---

ಚಂದನವನದ ಸಿಂಡ್ರೆಲ್ಲಾ ಎನ್ನುವ ಖ್ಯಾತಿಯನ್ನು ಪಡೆದಿರುವ ನಟಿ ರಾಧಿಕಾ ಪಂಡಿತ್ ವಿವಾಹದ ನಂತರ ತಮ್ಮ ಮನೆ ಹಾಗೂ ಮಕ್ಕಳ ಕಡೆ ತಮ್ಮ ಗಮನವನ್ನು ನೀಡಿ, ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ ನಟಿಯ ಚಾರ್ಮ್ ಕುಗ್ಗಿಲ್ಲ, ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ. ಅವರನ್ನು ಹಿಂಬಾಲಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ರಾಧಿಕಾ ಪಂಡಿತ್ ಅವರು ವಿಶೇಷ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಹಂಚಿಕೊಂಡು, ಅಭಿಮಾನಿಗಳಿಗೆ ಕೆಲವೊಂದು ವಿಚಾರಗಳ ಅಪ್ಡೇಟ್ ನೀಡುತ್ತಲೇ ಇರುತ್ತಾರೆ.

ಇದೀಗ ರಾಧಿಕಾ ಪಂಡಿತ್ ಅವರು ಶೇರ್ ಮಾಡಿರುವ ಹೊಸ ವೀಡಿಯೋ ಪೋಸ್ಟ್ ಒಂದು ಸಖತ್ ಸದ್ದು ಮಾಡಿದೆ. ರಾಧಿಕಾ ಪಂಡಿತ್ ಅವರು ಅಮೃತಕ್ಕೆ ಸಮಾನವಾದ ತಾಯಿಯ ಎದೆ ಹಾಲು ದಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ವಿಚಾರದ ಕುರಿತಾಗಿ ಒಂದು ವಿಶೇಷವಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಕ್ಕಳ ಬೆಳವಣಿಗೆಗೆ ತಾಯಿಯ ಎದೆ ಹಾಲು ಬಹಳ ಮುಖ್ಯವಾಗಿರುತ್ತದೆ. ಆದರೆ ಅನೇಕ ಕಾರಣಗಳಿಂದಾಗಿ ಮಕ್ಕಳು ಎದೆ ಹಾಲಿನಿಂದ ವಂಚಿತರಾಗುತ್ತಿದ್ದು, ಅಗತ್ಯ ಇರುವ ಮಕ್ಕಳಿಗೆ ಎದೆ ಹಾಲಿನ ದಾನ ಹೇಗೆ ನೆರವಾಗುತ್ತದೆ ಎನ್ನುವುದನ್ನು ರಾಧಿಕಾ ಪಂಡಿತ್ ಅವರು ತಿಳಿಸಿದ್ದಾರೆ.

ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಎದೆ ಹಾಲು ಉಳಿಸಿ, ಜೀವದಾನ ಮಾಡಿ ಎನ್ನುವ ಅಭಿಯಾನದ ಕುರಿತಾಗಿ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ತಾವೇ ಈ ವಿಷಯವಾಗಿ ಮಾತನಾಡಿರುವ ಒಂದು ವೀಡಿಯೋ ಸಂದೇಶವನ್ನು ಸಹಾ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈ ವೀಡಿಯೋ ಗೆ ರಾಧಿಕಾ ಪಂಡಿತ್ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತಿದೆ.

ರಾಧಿಕಾ ಅವರು ವೀಡಿಯೋದಲ್ಲಿ, ಬದುಕಿನ ಅತ್ಯಂತ ಮಹತ್ವಪೂರ್ಣ ಉಡುಗೊರೆಗಳಲ್ಲಿ ಎದೆ ಹಾಲು ಮುಖ್ಯವಾಗಿದ್ದು, ಇದರಲ್ಲಿರುವ ಅಂಶಗಳನ್ನು ಯಾವುದಕ್ಕೂ ಹೋಲಿಸುವುದು ಸಾಧ್ಯವಿಲ್ಲ. ಎಳೆ ಮಕ್ಕಳಿಗೆ ಇದು ಬಹಳ ಮುಖ್ಯವಾಗಿದ್ದು, ಇದರಿಂದ ಸಿಗುವ ಪೋಷಕಾಂಶಗಳು ಹಾಗೂ ರೋಗ ನಿರೋಧಕ ಶಕ್ತಿ ಗುಣವನ್ನು ಮತ್ತೆ ಯಾವುದೂ ನೀಡುವುದಿಲ್ಲ ಎಂದಿದ್ದಾರೆ.‌ ಆದರೆ ಕೆಲವು ಸಂದರ್ಭಗಳಲ್ಲಿ ತಾಯಿಂದಿರಲ್ಲಿ ಅಗತ್ಯ ಇರುವಷ್ಟು ಹಾಲು ಉತ್ಪಾದನೆ ಆಗದೇ ಇರಬಹುದು.

https://www.instagram.com/tv/CbaMBRtlny9/?utm_medium=copy_link

ಅಂತಹ ತಾಯಿಂದಿರ ಮಕ್ಕಳಿಗೆ ಸಹಾಯವಾಗುವ ದೃಷ್ಠಿಯಿಂದ ಎದೆ ಹಾಲು ಬ್ಯಾಂಕ್ ಗಳನ್ನು ತೆರೆಯಲಾಗಿದೆ. ಯಾರು ಸಶಕ್ತರಾಗಿರುವಿರೋ ಅವರು ದಾನ ಮಾಡಬಹುದು. ನಿಮ್ಮ ಜಿಲ್ಲೆಯಲ್ಲಿರುವ ಮಿಲ್ಕ್ ಬ್ಯಾಂಕ್ ಗಳಲ್ಲಿ ದಾನ ಮಾಡಬಹುದಾಗಿದ್ದು, ಇದರಿಂದ ಅಗತ್ಯ ಇರುವವರಿಗೆ ಸಹಾಯವಾಗಲಿದೆ ಎನ್ನುವ ಸಂದೇಶವನ್ನು ನೀಡಿದ್ದಾರೆ. ರಾಧಿಕಾ ಅವರ ಸಂದೇಶಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, ‘ಎದೆ ಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

Leave a Comment